ಬರ್ನೆಟ್ ಸರ್, ಫ್ರಾಂಕ್ ಮ್ಯಾಕ್ ಫರ್ಲೇನ್
1839. ಆಸ್ಟ್ರೇಲಿಯದ ಸೋಂಕುರಕ್ಷಣ ಶಾಸ್ತ್ರಜ್ಞ (ಇಮ್ಯೂನಾಲಜಿಸ್ಟ್), ಜನನ ವಿಕ್ಟೋರಿಯಾ (ಅಸ್ಟ್ರೇಲಿಯ). 3-9-1899. ಆಸ್ಟ್ರೇಲಿಯದ ವಿಕ್ಟೋರಿಯ ಪ್ರಾಂತ್ಯದಲ್ಲಿರುವ ಟ್ರಾರಲ್‍ಗನ್ ಎಂಬ ಪಟ್ಟಣದಲ್ಲಿ ಸ್ಥಳೀಯ ಬ್ಯಾಂಕೊಂದರ ಕಾರ್ಯನಿರ್ವಾಹಕನ ಮಗನಾಗಿ ಜನಿಸಿದ ಬರ್ನೆಟ್ ವಿಕ್ಟೋರಿಯದ ಗೀಲಾಂಗ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ ಮೆಲ್‍ಬೋರ್ನ್ ವಿಶ್ವವಿದ್ಯಾಲಯದ ವೈದ್ಯಕೀಯ ಪದವಿಯನ್ನು 1923ರಲ್ಲಿ ಪಡೆದು ಅಲ್ಲೇ ಅಧ್ಯಾಪಕರಾಗಿ ಸೇರಿದರು. ಅನಂತರ ಲಂಡನ್ನಿನ ಲಿಸ್ಟರ್ ಇನ್‍ಸ್ಟಿಟ್ಯೂಟಿನಲ್ಲಿ ಎರಡು ವರ್ಷ ಉನ್ನತ ವ್ಯಾಸಂಗ ಕೈಗೊಂಡು ಏಕಾಣುವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಗಳಿಸಿ 1927ರಲ್ಲಿ ಮೆಲ್‍ಬೋರ್ನಿಗೆ ವಾಪಸಾಗಿ ಅಲ್ಲಿಯ ವಾಲ್ಟರ್ ಮತ್ತು ಎಲೀಜಾ ಹಾಲ್ ವೈದ್ಯಕೀಯ ಸಂಶೋಧನ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಿತನಾದರು. 1944ರಲ್ಲಿ ಅದೇ ಸಂಸ್ಥೆಯ ಮುಖ್ಯ ನಿರ್ದೇಶಕರಾಗಿ ಬಡ್ತಿ ಪಡೆದರು. ಏಕಾಣುಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯೋ ಫೇಜುಗಳೆಂಬ ವೈರಸುಗಳ ವ್ಯಾಸಂಗ ಕೈಗೊಂಡು ಅವನ್ನು ಬಳಸಿಕೊಂಡು ಏಕಾಣುಗಳ ಜಾತಿಯನ್ನು ನಿರ್ದಿಷ್ಟವಾಗಿ ಗುರುತು ಹಚ್ಚಬಹುದೆಂಬ ಸಂಗತಿ ವ್ಯಕ್ತಪಡಿಸಿದರು. ಕೋಳಿಮೊಟ್ಟೆಯೊಳಗೆ ಬೆಳೆಯುತ್ತಿರುವ ಭ್ರೂಣದೊಳಗೆ ವೈರಸ್ ಹುಗಿಸಿ ಕೃಷಿಮಾಡಬಹುದು ಎಂದು ಮೊತ್ತಮೊದಲಾಗಿ ತೋರಿಸಿದರು (1933). ವೈರಸುಗಳ ಕೃಷಿಯ ಈ ಪ್ರಥಮ ವಿಧಾನವನ್ನು ಇಂದಿಗೂ ಸಾಮಾನ್ಯವಾಗಿ ಅನುಸರಿಸಲಾಗುತ್ತಿದೆ.

ಕೋಳಿಮೊಟ್ಟೆಯ ಭ್ರೂಣದೊಳಗೆ ವೈರಸುಗಳನ್ನು ಹುಗಿಸಿ ಕೃಷಿಮಾಡಬಹುದಾದ ವಿಧಾನ ಕಂಡುಕೊಂಡು ಮೇಲೆ ಬರ್ನೆಟ್ ಇನ್‍ಫ್ಲೂಎಂಜಾ ಕ್ರಿಮಿಗಳನ್ನೂ ಇತರ ವೈರಸುಗಳನ್ನೂ ಕೃಷಿ ಮಾಡತೊಡಗಿದರು. ಭ್ರೂಣ ಇಂಥ ವೈರಸುಗಳ ಕೃತಕ ಸೋಂಕನ್ನು ಪ್ರತಿರೋಧ ತೋರದೆ ಸಹಿಸಿಕೊಂಡು ಅವುಗಳ ಸಂಖ್ಯಾಭಿವೃದ್ಧಿಗೆ ಅವಕಾಶಕೊಡುವುದು ಇವರಿಗೆ ಆಶ್ಚರ್ಯಕರ ಎನಿಸಿತು. ಇವರಿಗೆ ತಿಳಿದಿದ್ದಂತೆ ಯಾವುದೇ ಪ್ರಾಣಿಯ ದೇಹದ ಒಳಗೆ ಅನ್ಯಪ್ರೋಟೀನ್ ಯುಕ್ತವಸ್ತುವನ್ನು-ಉದಾಹರಣೆಗೆ ರೋಗಾಣುಗಳು. ಪ್ರತಿರೋಧಜನಕ ಪ್ರೋಟೀನ್ ಸಾಮಾನ್ಯವಾಗಿ ಅನ್ಯಜಾತಿ ಜೀವಿಜನ್ಯವಾಗಿರಬೇಕಾಗಿದ್ದರೂ ಕೆಲವು ವೇಳೆ-ಮೇಲೆ ಹೇಳಿದ ಕಂಪುರಕ್ತಕಣಗಳು-ಸ್ವಜಾತಿ ಪ್ರಾಣಿಗಳ ಪ್ರೋಟೀನ್‍ಕೂಡ ಪ್ರತಿರೋಧವಸ್ತುಗಳನ್ನು ಉತ್ಪಾದಿಸುವ ವಿಷಯ ಈ ಶತಮಾನದ ಆದಿಯಲ್ಲಿ ವ್ಯಕ್ತಪಟ್ಟಿತ್ತು. ಅಂದರೆ ಒಂದು ಜೀವಿಯಲ್ಲಿ ಅದೇ ಜಾತಿ ಜೀವಿಗೆ ಒಗ್ಗದ ಪ್ರೋಟೀನುಗಳು ಇರುವುದೂ ಈ ತಳಹದಿಯ ಮೇಲೆ ಒಂದೇ ಜಾತಿಪ್ರಾಣಿಗಳಲ್ಲಿ ವಿವಿಧಗೋತ್ರಗಳನ್ನು ವಿಂಗಡಿಸಬಹುದಾದುದೂ ವೈದ್ಯವಿಜ್ಞಾನಿಗಳಿಗೆ ಗೊತ್ತಾಗಿತ್ತು. ಆದರೆ ಈಗ ಬರ್ನೆಟ್ಟನ ವೈರಸ್ ಕೃಷಿ ವಿಧಾನದಿಂದ ಅನ್ಯಪ್ರೋಟೀನಾದ ವೈರಸ್ ಕೋಳಿಭ್ರೂಣದಲ್ಲಿ ಪ್ರತಿರೋಧ ವಸ್ತುಜನಕವಾಗಿ ಇಲ್ಲದೇ ಇರುವುದು ವ್ಯಕ್ತಪಟ್ಟಿತು. ಅಲ್ಲದೆ ವಿಸ್‍ಕಾನ್‍ಸಿನ್ ವಿಶ್ವವಿದ್ಯಾಲಯದ ಓವೆನ್ ಎಂಬಾತ ಗರ್ಭಸ್ಥ ಯಮಳ ಕರುಗಳಲ್ಲಿ ಅವುಗಳ ರಕ್ತ ಪ್ರಾರಂಭದಲ್ಲಿ ಬೇರೆ ಬೇರೆ ಗೋತ್ರದವೇ ಆಗಿದ್ದರೂ ಗರ್ಭದಲ್ಲಿ ಬೆಳೆಯುತ್ತಿರುವಾಗ ಬೆರಕೆ ಆಗಿಬಿಟ್ಟು. ಎಡವಟ್ಟು ಏನೂ ಆಗದೆ ಜೀವಂತ ಕರುಗಳ ಈಯುವಿಕೆ ಆಗುವುದನ್ನೂ ಅವು ತಮ್ಮ ಜೀವಮಾನಪರ್ಯಂತ ಹೀಗೆ ಬೆರಕೆ ರಕ್ತದವೇ ಆಗಿರುವುದನ್ನೂ ತೋರಿಸಿದೆ (1946). ಇದಕ್ಕೆ ಕೆಲವು ವರ್ಷಗಳ ಹಿಂದೆ ಅಮೆರಿಕದ ರಾಕ್‍ಫೆಲರ್ ಸಂಸ್ಥೆಯಲ್ಲಿ ಟ್ರೌಟ್ ಎಂಬಾತ ಗರ್ಭಸ್ಥ ಇಲಿಭ್ರೂಣಗಳಿಗೆ ವಿಶಿಷ್ಟ ವೈರಸ್ಸೊಂದರ ಸೋಂಕನ್ನು ತಾಗಿಸಿದಾಗ ಅವು ರೋಗ ಬಾಧಿತವಾಗದೆ ಆರೋಗ್ಯಸ್ಥಿತಿಯಲ್ಲಿ ಜನಿಸುವುದನ್ನೂ ಆದರೆ ಜೀವಮಾನ ಪರ್ಯಂತ ತಮ್ಮ ದೇಹದೋಳಗೆ ಈ ವೈರಸ್ಸುಗಳನ್ನು ಹೊಂದಿರುವುವೆಂಬುದನ್ನೂ ವಿಶದಪಡಿಸಿದ್ದ. ಆಗಿನ ವೈದ್ಯಕೀಯ ತಿಳಿವಳಿಕೆಯ ಪ್ರಕಾರ ಮೇಲಿನ ಪ್ರಯೋಗಗಳಲ್ಲಿ ಒಂದು ಕರುವಿನ ರಕ್ತ ಇನ್ನೊಂದು ಕರುವಿನಲ್ಲಿ ಮತ್ತು ವೈರಸ್ ಇಲಿಭ್ರೂಣದಲ್ಲಿ ಅನ್ಯಪ್ರೋಟೀನಾಗಿ ವರ್ತಿಸಿ ಪ್ರತಿರೋಧ ವಸ್ತುವನ್ನು ಉತ್ಪಾದಿಸಿ ಅನಾಹುತವನ್ನು ಉಂಟು ಮಾಡಬೇಕಾಗಿತ್ತು ಬೆಳೆದ ಕರುಗಳಲ್ಲಿ ರಕ್ತಮಿಶ್ರಣ ಮತ್ತು ಬೆಳೆದ ಇಲಿಯಲ್ಲಿ ವೈರಸ್ಸಿನ ಸೋಂಕು ಉಂಟಾದಾಗ ಅನಾಹುತ ಆಗುವುದೇ ಖಂಡಿತ. ಅದರ ಗರ್ಭಸ್ಥ ಕರುವಿನಲ್ಲಿ ಮತ್ತು ಇಲಿಯ ಭ್ರೂಣದಲ್ಲಿ ಹೀಗಾಗಲಿಲ್ಲ. ಟ್ರೌಟನ ಓವೆನ್ನನ ಮತ್ತು ಸ್ವಂತ ಪ್ರಯೋಗಗಳಿಂದ ತಿಳಿದುಬಂದ ಈ ವಿಷಯಗಳನ್ನೆಲ್ಲ ಕ್ರೋಡೀಕರಿಸಿ ಪರ್ಯಾಲೋಚಿಸುತ್ತ ಬರ್ನೆಟ್ ಈ ತೀರ್ಮಾನಕ್ಕೆ ಬಂದರು: ಭ್ರೂಣಾವಸ್ಥೆಯ ವೇಳೆ ಭ್ರೂಣದ ಸಂಪರ್ಕಹೊಂದಿದ ಯಾವ ಪ್ರೋಟೀನಿಗೇ ಆಗಲಿ ಪ್ರತಿರೋಧವಿರುವುದಿಲ್ಲ. ಆ ಪ್ರೋಟೀನುಗಳೆಲ್ಲ ಜನನಾನಂತರವೂ ಜೀವಿಗೆ ಒಗ್ಗುವಂಥವೇ ಆಗಿರುತ್ತವೆ. ಜನನಾನಂತರ ಅನ್ಯ, ಆದರೆ ಜೀವಿಯ ದೇಹದಲ್ಲಿಲ್ಲದ ಮತ್ತು ಅದರ ಭ್ರೂಣಾವಸ್ಥೆಯಲ್ಲಿ ಅದು ಸಂಪರ್ಕ ಪಡೆದಿರದ, ಪ್ರೋಟೀನುಗಳಿಗೆ ಪ್ರತಿರೋಧವಿದ್ದು ಅಂಥ ಪ್ರೋಟೀನುಗಳು ಜೀವಿಗೆ ಒಗ್ಗದವಾಗಿರುತ್ತವೆ. ಜೀವಿಯ ದೇಹದಲ್ಲಿ ಇಂಥ ಪ್ರೋಟೀನುಗಳೆಲ್ಲ ಪ್ರತಿರೋಧವಸ್ತುಜನಕಗಳಾಗಿ ವರ್ತಿಸಿ ಪ್ರತಿರೋಧವಸ್ತುಗಳನ್ನು ಉತ್ಪಾದಿಸಿ ಅವುಗಳಿಂದ ತಾವೇ ನಿಷ್ಕ್ರಿಯಗೊಳ್ಳಲ್ಪಡುತ್ತವೆ. ಸೋಂಕು ನಿರೋಧಕತೆಯ ವಿಚಾರವಾಗಿ ಬರ್ನೆಟ್ ಅವರ ಈ ಸಿದ್ಧಾಂತಕ್ಕೆ ಕ್ಲೋನಲ್ ಸೆಲೆಕ್ಷನ್ ಸಿದ್ಧಾಂತ ಎಂದು ಹೆಸರು (ಜೀವಿಯಲ್ಲಿ ಕಾಣಬರುವ ಪ್ರತಿರೋಧಕತೆಯ ವಿಚಾರವಾಗಿ ವ್ಯಾಸಂಗಗಳು ಇಂದಿಗೂ ಮುಂದುವರಿಯುತ್ತಲೇ ಇದ್ದು ಈ 20-30 ವರ್ಷಗಳಲ್ಲಿ ಬರ್ನೆಟರ ಕ್ಲೋನಲ್ ಸೆಲೆಕ್ಷನ್ ಸಿದ್ಧಾಂತ ಮಾರ್ಪಾಡಾಗಿ ಇನ್ನೂ ಅನೇಕ ವಿಷಯಗಳು ಸ್ಪಷ್ಟವಾಗಿವೆ). ತಮ್ಮ ಸಿದ್ಧಾಂತದ ಪ್ರಕಾರ ಯಾವುದೇ ನಿರ್ದಿಷ್ಟ ಪ್ರೋಟೀನನ್ನು ಒಂದು ಪ್ರಾಣಿಯ ಭ್ರೂಣಾವಸ್ಥೆಯಲ್ಲಿ ಅದರ ಒಳಹುಗಿಸಿ ಜನನಾನಂತರವೂ ಆ ಪ್ರೋಟೀನ್ ಅದರ ದೇಹದಲ್ಲಿ ಪ್ರತಿ ರೋಧವಸ್ತುಜನಕವಾಗಿ ವರ್ತಿಸದೆ ಒಗ್ಗಿಕೊಳ್ಳುವಂತೆ ಮಾಡಬಹುದು, ಆ ದಿನ ದೂರವಿಲ್ಲ ಎಂದು ಬರ್ನೆಟ್ ಭವಿಷ್ಯ ನುಡಿದಿದ್ದರು (1946). ಆದರೆ ಈ ದಿಶೆಯಲ್ಲಿ ಬರ್ನೆಟ್ ಸ್ವತಃ ಮಾಡಿದ ಪ್ರಯೋಗಗಳು ಸಫಲವಾಗಲಿಲ್ಲ. ಕೋಳಿಯ ಭ್ರೂಣದೊಳಗೆ ಸಾಮಾನ್ಯವಾಗಿ ಪ್ರತಿರೋಧವಸ್ತುಜನಕಗಳಾಗಿ ಬಳಸುವ ಅನ್ಯ ಪ್ರೋಟೀನುಗಳನ್ನು ಹುಗಿಸಿದ ಬಳಿಕ ಜನಿಸಿದ ಕೋಳಿಮರಿಯಲ್ಲಿ ಈ ಪ್ರೋಟೀನುಗಳು ಒಗ್ಗದಂಥವೇ ಆಗಿದ್ದು ಪ್ರತಿರೋಧವಸ್ತುಗಳನ್ನು ಉತ್ಪಾದಿಸುವುದು ಕಂಡುಬಂತು. ಇದರಿಂದ ಬರ್ನೆಟ್ ಮಾಡಿದ ಸೂಚನೆ ತಪ್ಪೇನೋ ಅವರ ಭವಿಷ್ಯವಾಣಿ ಸುಳ್ಳೇನೋ ಎನ್ನಿಸಿದರೂ ಬೇರೆ ರೀತಿಯ ಪ್ರಯೋಗಗಳಿಂದ ಅವರ ಸೂಚನೆಯ ತತ್ತ್ವಾಧಾರಕ್ಕೆ (ರ್ಯಾಷನಲ್) ಬೆಂಬಲ ಸಿಕ್ಕಿತು. ಅದು ಆದದ್ದು ಈ ಮುಂದಿನಂತೆ ಬರ್ನೆಟ್ ಅವರ ವ್ಯಾಸಂಗಗಳು ಜರಗುತ್ತಿದ್ದ ಆ ಸಮಯದಲ್ಲೆ ಅಂಗ ಅಂಗಾಂಶಗಳ ವಾಟಿವಿಷಯದಲ್ಲೂ ಪ್ರಯೋಗಾತ್ಮಕ ವ್ಯಾಸಂಗಗಳು ಜರಗುತ್ತಿದ್ದವು. ಒಂದು ಪ್ರಾಣಿಗೆ ಅದೇ ಜಾತಿಯ ಇನ್ನೊಂದು ಪ್ರಾಣಿಯ ಅಂಗವನ್ನು ನಾಟಿಹಾಕಿದರೆ, ನಾಟಿಮಾಡಿದ ಅಂಗ ಪ್ರಾಣಿಯ ದೇಹದಲ್ಲಿ ಅನ್ಯಪ್ರೋಟೀನಿನಂತೆ ವರ್ತಿಸಿ ಪ್ರತಿ ರೋಧವಸ್ತುಗಳನ್ನು ಉತ್ಪಾದಿಸಿ ಅವುಗಳಿಂದ ತಾನೇ ನಿಷ್ಕ್ರಿಯೆಗೊಳಿಸಲ್ಪಟ್ಟು ನಾಶವಾಗುವುದೂ ಆದ್ದರಿಂದಲೇ ಅನ್ಯಮೂಲದ ನಾಟಿ ಸಾಮಾನ್ಯವಾಗಿ ಸಫಲವಾಗದೆ ಹೋಗುವುದೂ ಇಷ್ಟುಹೊತ್ತಿಗೆ ತಿಳಿದುಬಂದಿತು. ಮೈಸುಟ್ಟು ವಿಕೃತಿಗೊಂಡ ವ್ಯಕ್ತಿಗಳಿಗೆ ಬೇರೆಯವರ ಚರ್ಮವನ್ನು ನಾಟಿಹಾಕಿ ದುರಸ್ತಿಮಾಡುವ ಕ್ರಮ ಹೀಗೆ ಸಾಮಾನ್ಯವಾಗಿ ವಿಫಲವೇ ಆಗುತ್ತಿತ್ತು. ಬರ್ನೆಟ್ ದೇಹಕ್ಕೆ ಅನ್ಯ ಪ್ರೋಟೀನನ್ನು ಒಗ್ಗಿಸಬೇಕಾದರೆ ಏನು ಮಾಡಬೇಕು ಎಂದು ಸೂಚಿಸಿದ್ದಂತೆ ಮೇಡವಾರ್ ಎಂಬ ಬ್ರಿಟಿಷ್ ವೈದ್ಯ ಚರ್ಮದ ನಾಟಿ ವಿಷಯದಲ್ಲಿ ಪ್ರಯೋಗ ಕೈಗೊಂಡರು (1948). ಇಲಿಯ ಭ್ರೂಣಾವಸ್ಥೆಯಲ್ಲಿ ಮೇಡವಾರ್ ಅದರ ದೇಹಕ್ಕೆ ಇನ್ನೊಂದು ವಂಶದ ಇಲಿಯ ಗುಲ್ಮದ ಕೋಶಗಳನ್ನು ಹುದುಗಿಸಿದರು. ಜನನಾನಂತರ ಈ ಇಲಿಮರಿಗೆ ಗುಲ್ಮಕೋಶದಾತೃ ಇಲಿಯ ಚರ್ಮವನ್ನು ನಾಟಿ ಹಾಕಿದರು. ನಾಟಿ ಸಫಲವಾಯಿತು. ಹೀಗೆ ಬರ್ನೆಟರ ವಾದ ಪ್ರಯೋಗಿಕವಾಗಿ ದೃಢೀಕರಿಸಲ್ಪಟ್ಟಂತಾಯಿತು. ಈ ಸಿದ್ಧಿ ಬರ್ನೆಟ್ ಮತ್ತು ಮೇಡವಾರ್ ಇವರಿಗೆ ನೊಬೆಲ್ ಪಾರಿತೋಷಿಕವನ್ನು (1960) ಜಂಟಿಯಾಗಿ ದೊರಕಿಸಿಕೊಟ್ಟಿತು.

ಮಾನವರಲ್ಲಿ ಅಂಗನಾಟಿಯ ಸಾಫಲ್ಯಕ್ಕಾಗಿ ಬರ್ನೆಟ್ ಸೂಚಿಸಿದ ಕ್ರಮವನ್ನು ಅನುಸರಿಸುವ ಹಾಗಿಲ್ಲವೆಂಬುದು ವ್ಯಕ್ತ. ಅದೃಷ್ಟವಶಾತ್ ಅನ್ಯಪ್ರೋಟೀನಿಗೆ ಪ್ರತಿರೋಧವಿರದಂತೆ ಮಾಡಲು ಬೇರೆ ವಿಧಾನಗಳು ತಿಳಿದುಬಂದಿವೆ. ಉದಾಹರಣೆಗೆ 6-ಮರ್‍ಕ್ಯಾಪ್ಟೋಪ್ಯೂರಿನನ್ನು ಬಳಸಿ ಪ್ರತಿರೋಧವಸ್ತು ಉತ್ಪಾದನೆಯನ್ನು ತಡೆಯಬಹುದು ಎಂದು ತೋರಿಸಲಾಗಿದೆ. ಅಂಥ ರಾಸಾಯನಿಕಗಳ ಬಳಕೆಯಿಂದ ಮತ್ತು ಇತರ ಅಗತ್ಯಕ್ರಮಗಳಿಂದ ಈಗ ಮಾನವರಲ್ಲಿ ಅಂಗನಾಟಿ ಸಫಲವಾಗುತ್ತಿದೆ.

ಪ್ರಧಾನವಾಗಿ ವೈರಸುಗಳ ಸೋಂಕು ಹಾಗೂ ಅವುಗಳ ವಿರುದ್ಧ ರಕ್ಷಣೆ. ಈ ವ್ಯಾಸಂಗಗಳಲ್ಲಿ ನಿರತರಾಗಿದ್ದು ಅನುಷಂಗಿಕವಾಗಿ ಕ್ಲೋನಲ್ ಸೆಲೆಕ್ಷನ್ ಸಿದ್ಧಾಂತವನ್ನು ಮಂಡಿಸಿದ ಬರ್ನೆಟ್ ಕಿ ಜ್ವರದ ಕ್ರಿಮಿ ಒಂದು ಬಗೆಯ ರಿಕೆಟ್ಸೆಯ (ಇದನ್ನು ರಿಕೆಟ್ಸೆಯ ಬರ್ನೆಟಿ ಎಂದೇ ಕರೆಯಲಾಗಿದೆ) ಮುಂತಾದ ಆಸ್ಟ್ರೇಲಿಯದಲ್ಲಿ ಪ್ರಧಾನವಾಗಿ ಕಾಣಬರುವ ಅನೇಕ ಬಗೆಯ ವೈರಸುಗಳು ಮತ್ತಿತರ ರೋಗಾಣುಗಳನ್ನು ಪ್ರತ್ಯೇಕಿಸಿದ್ದಾರೆ. ಇವರ ವೈಜ್ಞಾನಿಕ ಸಂಶೋಧನೆಗಳ ಮಹತ್ವವನ್ನು ಗುರುತಿಸಿ 1942ರಲ್ಲಿ ಇವರನ್ನು ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಆಗಿ ಚುನಾಯಿಸಲಾಯಿತು. 1947ರಲ್ಲಿ ಇವರಿಗೆ ರಾಯಲ್ ಸೊಸೈಟಿಯ ಪದಕವೂ 1950ರಲ್ಲಿ ಕೋಪ್ಲಿ ಪದಕವೂ ದೊರೆತುವು. 1951ರಲ್ಲಿ ಸರ್ ಪದವಿಯನ್ನು ಕೊಡಲಾಯಿತು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ